ಚಿಕ್ಕಮಗಳೂರು: ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಕಳೆದ ರಾತ್ರಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಆಲಿಕಲ್ಲು ಮಳೆಗೆ ಬಯಲುಸೀಮೆ ಜನ ಬೆಚ್ಚಿ ಬಿದ್ದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಅಗಲೇರಿ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದಾಗಿ ಮೂರು ಮನೆಗಳು ಡ್ಯಾಮೇಜ್ ಆಗಿದ್ದು, ಭಾರೀ ನಷ್ಟ ಸಂಭವಿಸಿದೆ.
ಮಂಗಳಮ್ಮ, ರತ್ನಮ್ಮ, ರಂಗಣ್ಣ ಅವರ ಮನೆಗಳಿಗೆ ಹಾನಿಯಾಗಿದ್ದು, ಆಲಿಕಲ್ಲು ಮಳೆಯಿಂದ ಮನೆಯ ಹೆಂಚು, ಸೀಟುಗಳಿಗೆ ಹಾನಿಯಾಗಿದೆ. ಜೊತೆಗೆ ಮನೆಯಲ್ಲಿದ್ದ ಸಾವಿರಾರು ಮೌಲ್ಯದ ಆಹಾರ ಸಾಮಗ್ರಿ ಹಾಗೂ ಪೀಠೋಪಕರಣಗಳಿಗೂ ಹಾನಿಯಾಗಿದೆ.
ರಾತ್ರಿಯಾಗುತ್ತಿದ್ದಂತೆಯೇ ಗುಡುಗು ಸಹಿತ ಮಳೆಯಾಗಿತ್ತು. ನೋಡನೋಡುತ್ತಿದ್ದಂತೆಯೇ ಆಲಿಕಲ್ಲು ಮಳೆ ಸುರಿದಿದ್ದು, ಸಾರ್ವಜನಿಕರಿಗೆ ಸಂಕಷ್ಟ ಸೃಷ್ಟಿಸಿದೆ. ನಷ್ಟಗೊಳಗಾದ ಮನೆಯವರಿಗೆ ಪರಿಹಾರ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.