ನಮ್ಮ ದೇಶದಲ್ಲಿ ದೇವಾಲಯಗಳಿಗೆ ಪವಿತ್ರ ಸ್ಥಾನವಿದೆ. ದೇವಸ್ಥಾನಗಳು ಮನಸ್ಸಿಗೆ ನೆಮ್ಮದಿ ನೀಡುವ ತಾಣಗಳಾಗಿವೆ. ದೇವರ ದರ್ಶನ ದೇಹ, ಮನಸ್ಸಿನಲ್ಲೊಂದು ಚೈತನ್ಯ ತುಂಬುತ್ತದೆ. ಆದರೆ, ದೇವಸ್ಥಾನದ ಭೇಟಿ ಬರೀ ಧಾರ್ಮಿಕ ಆಚರಣೆಯಲ್ಲವಾಗಿದೆ. ದೇವಾಲಯಗಳಿಗೆ ಹೋಗುವುದರಿಂದ ಅದು ನಮ್ಮನ್ನು ಆಧ್ಯಾತ್ಮಿಕವಾಗಿ ಎಷ್ಟು ಶ್ರೀಮಂತಗೊಳಿಸಲು ಸಹಾಯ ಮಾಡುತ್ತದೋ, ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ತರುತ್ತದೆ. ಯಾಕೆಂದರೆ, ದೇವಾಲಯಗಳ ಭೇಟಿ ವೈಜ್ಞಾನಿಕ ಅರ್ಥವನ್ನೂ ಹೊಂದಿವೆ. ಮನಸ್ಸು, ದೇಹ ಮತ್ತು ಆತ್ಮಕ್ಕೆ ಇದು ತರುವ ಪ್ರಯೋಜನಗಳು ಹಲವಾರು. ದೇಗುಲದ ಪ್ರಾಂಗಣದ ಧನಾತ್ಮಕ ಶಕ್ತಿ ನಮ್ಮಲ್ಲೊಂದು ಸಕಾರಾತ್ಮಕತೆಯ ಅಲೆಯನ್ನು ಸೃಷ್ಟಿಸುತ್ತದೆ. ದೇವಾಲಯದಲ್ಲಿ ನಾವು ಮಾಡುವ ಪ್ರತಿಯೊಂದು ಕಾರ್ಯಗಳೂ ನಮ್ಮ ಇಂದ್ರಿಯಗಳನ್ನು ಸಕ್ರಿಯಗೊಳಿಸಲು ಉದ್ದೇಶಿಸಲಾಗಿದೆ. ಈ ಇಂದ್ರಿಯಗಳನ್ನು ಸಕ್ರಿಯಗೊಳಿಸಿದ ನಂತರ ದೇವಾಲಯದಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಮನುಷ್ಯನ ದೇಹವು ಅತ್ಯುತ್ತಮವಾಗಿ ಹೀರಿಕೊಳ್ಳುತ್ತದೆ. . ದೇವರ ದರ್ಶನ ನಮ್ಮಲ್ಲೊಂದು ನೆಮ್ಮದಿಯ ಭಾವ ತರುತ್ತದೆ.
ಸರ್ವೇ ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಿಗೆ ಹೋಗುವಾಗಲೂ ಭಕ್ತರು ಪಾದರಕ್ಷೆಯನ್ನು ಹೊರಗೆ ಇಟ್ಟು ಬರಿಗಾಲಿನಲ್ಲಿ ದೇಗುಲದೊಳಗೆ ಪ್ರವೇಶಿಸುತ್ತಾರೆ. ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಉದ್ದೇಶ ಇದರದ್ದಾಗಿದೆ. ಆದರೆ, ಬರಿಗಾಲಿನಲ್ಲಿ ದೇಗುಲ ಪ್ರವೇಶದಿಂದ ದೇವ ಸನ್ನಿಧಿಯ ಪಾವಿತ್ರ್ಯತೆ ಕಾಪಾಡುವ ಜತೆಗೆ ಇದರಿಂದ ನಮ್ಮ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಗಳಿವೆ. ದೇವಾಲಯಗಳಲ್ಲಿ ಕಾಂತೀಯ ಮತ್ತು ವಿದ್ಯುತ್ ಕ್ಷೇತ್ರಗಳ ಶುದ್ಧ ಕಂಪನಗಳು ಹೆಚ್ಚಿರುತ್ತವೆ. ದೇಗುಲದ ನೆಲ ಧನಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಉತ್ತಮ ವಾಹಕಗಳಾಗಿವೆ. ಈ ನೆಲದಲ್ಲಿ ಬರಿಗಾಲಿನಲ್ಲಿ ನಡೆಯುವುದರಿಂದ ಶಕ್ತಿಯು ನಿಮ್ಮ ದೇಹದ ಮೂಲಕ ಹಾದುಹೋಗಲು ಸಹಾಯ ಮಾಡುತ್ತದೆ. ದೇವಾಲಯಕ್ಕೆ ಹೋಗುವಾಗ ಸಾಮಾನ್ಯವಾಗಿ ಎಲ್ಲರೂ ಶುದ್ಧಾಚಾರದಿಂದ ಹೋಗುತ್ತಾರೆ. ತಲೆಗೆ ಸ್ನಾನ ಮಾಡಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ತಲೆಗೆ ಸ್ನಾನ ಮಾಡುವ ಮೂಲಕ ನಾವು ನಮ್ಮ ಇಡೀ ದೇಹವನ್ನು ಸ್ವಚ್ಛವಾಗಿರಿಸಿಕೊಳ್ಳುತ್ತೇವೆ. ಆದರೆ, ನಮ್ಮ ಹೃದಯದಲ್ಲಿನ್ನೂ ಆಸೆ, ಕೋಪ, ಕಾಮ, ಅಹಂಕಾರ ಸೇರಿದಂತೆ ನಾನಾ ಭಾವನೆಗಳು ಇರುತ್ತವೆ. ಇದರನ್ನು ದೂರ ಮಾಡುವ ಶಕ್ತಿ ನಮ್ಮಲ್ಲಿ ಇರುವುದಿಲ್ಲ. ಹೀಗಾಗಿ, ಈ ಎಲ್ಲಾ ಭಾವನೆಗಳನ್ನು ದೂರ ಮಾಡಲು ನಾವು ನಮ್ಮ ದೇಹವನ್ನು ಸ್ವಚ್ಛವಾಗಿರಿ, ಭಗವಂತನ ಆಶೀರ್ವಾದವನ್ನು ಪಡೆಯಲು ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಅಂದರೆ, ನಮ್ಮೆಲ್ಲಾ ಪಾಪ, ಕೆಟ್ಟ ಆಲೋಚನೆ, ಭಾವನೆಗಳನ್ನು ದೂರ ಮಾಡಿ, ಹೃದಯವನ್ನು ಶುದ್ಧವಾಗಿರಿಸಿಕೊಳ್ಳುವ ಸಂಕೇತವೇ ತಲೆ ಸ್ನಾನವಾಗಿದೆ.
ಗಂಟೆ, ಮಂಗಳ ವಾದ್ಯಗಳ ನಿನಾದ ಸದಾ ದೇವಸ್ಥಾನಗಳಲ್ಲಿ ಕಿವಿಗಿಂಪುವಾಗಿದೆ. ಅದರ ಜತೆಗೆ, ದೇಗುಲದಲ್ಲಿ ಕಟ್ಟಿರುವ ಗಂಟೆಗಳನ್ನು ಬಾರಿಸಿದಾಗ ಹೊರ ಹೊಮ್ಮುವ ನಾದ ಕೂಡಾ ನಮ್ಮಲ್ಲೊಂದು ಭಕ್ತಿ ಭಾವವನ್ನು ಸ್ಫುರಿಸುತ್ತದೆ. ಈ ಭಕ್ತಿಭಾವದ ಜತೆಗೆ ಗಂಟೆಯ ಶಬ್ದ ನಮ್ಮನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ನೀವು ದೇವಾಲಯದ ಗಂಟೆಯನ್ನು ಬಾರಿಸಿದಾಗ ಶ್ರವಣೇಂದ್ರಿಯವು ಸಕ್ರಿಯಗೊಳ್ಳುತ್ತದೆ. ಜತೆಗೆ, ಮೆದುಳಿನಲ್ಲಿ ಚಟುವಟಿಕೆಗೆ ಕಾರಣವಾಗುತ್ತವೆ. ಹಲವು ಲೋಹಗಳಿಂದ ದೇಗುಲದ ಗಂಟೆಗಳನ್ನು ತಯಾರಿಸಲಾಗುತ್ತದೆ. ಈ ಲೋಹದ ಪ್ರಮಾಣಗಳು ತೀಕ್ಷ್ಣವಾದ ಮತ್ತು ಅದ್ಭುತವಾದ ನಾದವನ್ನು ಉತ್ಪಾದಿಸುತ್ತವೆ. ಈ ಪ್ರತಿಧ್ವನಿ ಕನಿಷ್ಠ ಏಳು ಸೆಕೆಂಡುಗಳವರೆಗೆ ಇರುತ್ತದೆ. ಇದು ನಿಮ್ಮ ದೇಹದ ಏಳು ಹೀಲಿಂಗ್ ಸೆಂಟರ್ಗಳು ಅಥವಾ ಏಳು ಚಕ್ರಗಳನ್ನು ಸ್ಪರ್ಶಿಸುವುದಕ್ಕೆ ಉತ್ತಮವಾಗಿದೆ. ಗಂಟೆಯ ಶಬ್ದ ಕಿವಿಗೆ ಬೀಳುತ್ತಿದ್ದಂತೆಯೇ ನಿಮ್ಮ ಮೆದುಳಿನಲ್ಲಿರುವ ಎಲ್ಲಾ ಆಲೋಚನೆಗಳು ದೂರವಾಗಿ ಶಾಂತತೆ ಮೂಡುತ್ತದೆ.
ಎಲ್ಲಾ ದೇಗುಲದಲ್ಲಿ ಕರ್ಪೂರವನ್ನೂ ಬೆಳಗಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಆರತಿಯ ಸಮಯದಲ್ಲಿ ಹೆಚ್ಚಾಗಿ ಕರ್ಪೂರವನ್ನು ಬಳಸಲಾಗುತ್ತದೆ. ಆರತಿ ತಟ್ಟೆಯಲ್ಲಿರುವ ಬೆಳಗುವ ಕರ್ಪೂರ ನಮ್ಮ ದೃಷ್ಟಿಯಿಂದ ಸಕ್ರಿಯಗೊಳಿಸುತ್ತದೆ. ಜತೆಗೆ, ಆರತಿ ತಟ್ಟೆಯನ್ನು ನಮ್ಮ ಮುಂದೆ ತಂದಾಗ ನಾವು ಬೆಳಗುವ ಜ್ಯೋತಿಯ ಮೇಲೆ ನಮ್ಮ ಕೈಗಳನ್ನು ಆಡಿಸಿ ಕೈಯನ್ನು ತಲೆ ಅಥವಾ ಕಣ್ಣುಗಳಿಗೆ ಸ್ಪರ್ಶಿಸುತ್ತೇವೆ. ಇದರಿಂದ ನಮ್ಮ ಸ್ಪರ್ಶ ಪ್ರಜ್ಞೆಯು ಕ್ರಿಯಾಶೀಲವಾಗುತ್ತದೆ. ದೇವರಿಗೆ ಹೂಗಳನ್ನು ಅರ್ಪಿಸುವುದು ಪದ್ಧತಿಯಾಗಿದೆ. ಹೀಗೆ ದೇವರಿಗೆ ಹೂಗಳನ್ನು ಅರ್ಪಿಸುವಾಗ ಆ ಸುಮಗಳ ಸೌಂದರ್ಯ, ಅವುಗಳ ಪರಿಮಳ ಮನಸ್ಸಿಗೆ ಆನಂದ ನೀಡುತ್ತದೆ. ಇದು ನಮ್ಮನ್ನು ಕೆಟ್ಟ ಮನಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತದೆ. ಜತೆಗೆ, ಹೂಗಳ ಮೃದುತ್ವ ನಮ್ಮ ಸ್ಪರ್ಶದ ಹಿತವನ್ನೂ ಹೆಚ್ಚಿಸುತ್ತದೆ. ತೀರ್ಥ ಸೇವನೆ ದೇಗುಲ ಭೇಟಿಯ ಪ್ರಮುಖ ಭಾಗವಾಗಿದೆ. ದೇವಸ್ಥಾನದಲ್ಲಿ ಸಿಗುವ ತೀರ್ಥ ಅತ್ಯಂತ ಪವಿತ್ರ ಎಂಬುದು ಆಸ್ತಿಕರ ನಂಬಿಕೆಯಾಗಿದೆ. ತುಳಸಿ ಸೇರಿದಂತೆ ಗಿಡಮೂಲಿಕೆ, ಹೂಗಳೊಂದಿಗೆ ಶುದ್ಧ ಜಲದ ಮಿಶ್ರಣವನ್ನು ಸೇವಿಸಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಅದೂ ಅಲ್ಲದೆ, ಇದು ರುಚಿಯ ಪ್ರಜ್ಞೆಯನ್ನು ಸಕ್ರಿಯಗೊಳಿಸುತ್ತದೆ. ತಾಮ್ರದಂತಹ ಲೋಹದ ಪೂಜಾ ಪರಿಕರಗಳಲ್ಲಿ ಸಂಗ್ರಹಿಸಿರುವ ಈ ನೀರಿನಿಂದ ಆರೋಗ್ಯಕ್ಕೂ ನಾನಾ ಪ್ರಯೋಜನಗಳಿವೆ. ಎಂಟು ಗಂಟೆಗಳ ಕಾಲ ತಾಮ್ರದ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸುವುದು ವಾತ, ಪಿತ್ತ ಮತ್ತು ಕಫಗಳೆಂಬ ತ್ರಿದೋಷಗಳನ್ನು ಸಮತೋಲನಗೊಳಿಸುತ್ತದೆಯಾಗಿದೆ. ದೇವಸ್ಥಾನದಲ್ಲಿ ದೇಗುಲದ ಗರ್ಭಗುಡಿಗೆ ಪ್ರದಕ್ಷಿಣೆ ಬರುವುದು ಕೂಡಾ ಸಂಪ್ರದಾಯವಾಗಿದೆ. ದೇವರ ಮುಂದೆ ನಾವೆಲ್ಲಾ ಶೂನ್ಯ ಎಂಬ ಭಾವವಾಗಿದೆ. ಇದರೊಂದಿಗೆ ಪ್ರದಕ್ಷಿಣೆಯಿಂದ ಆರೋಗ್ಯಕ್ಕೂ ಪ್ರಯೋಜನ ಇದೆಯಾಗಿದೆ. ನಾವು ಪ್ರದಕ್ಷಿಣೆ ಬರುವುದರಿಂದ ನಮ್ಮ ದೇಹ ವಿಗ್ರಹ ಮತ್ತು ದೇಗುಲದ ಪ್ರಾಂಗಣದ ಉತ್ತಮ ಕಂಪನಗಳನ್ನು ಹೀರಿಕೊಳ್ಳಲು ಸಹಾಯವಾಗುತ್ತದೆ. ಉತ್ತಮ ಆರೋಗ್ಯ ಪಡೆಯಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಇದು ಸಹಾಯ ಮಾಡುತ್ತದೆ