ಸುಕ್ಷೇತ್ರ ಹುಲಿಗೆಮ್ಮ ದೇವಿ ಜಾತ್ರೆ: ಮಹಿಳಾ, ಮಕ್ಕಳ ಸುರಕ್ಷತೆಗಾಗಿ ಜಾಗೃತಿ ಕಾರ್ಯಕ್ರಮ
ಕೊಪ್ಪಳ ಮೇ 14 (ಕರ್ನಾಟಕ ವಾರ್ತೆ): ಉತ್ತರ ಕರ್ನಾಟಕ ಸುಪ್ರಸಿದ್ಧ ಸುಕ್ಷೇತ್ರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾ ರಥೋತ್ಸವ ಸಂದರ್ಭದಲ್ಲಿ ಮಕ್ಕಳ ಮತ್ತು ಮಹಿಳೆಯರ ಸುರಕ್ಷತಾ ಜಾಗೃತಿ ಮತ್ತು ಸಮಾಜದ ಅನಿಷ್ಠ ದೇವದಾಸಿ ಪದ್ದತಿ ಕುರಿತು ಮೇ 13ರಿಂದ ಮೇ 15ರವರೆಗಿನ 3 ದಿನಗಳ ಜಾಗೃತಿ ಕಾರ್ಯಕ್ರಮಕ್ಕೆ ದೇವಸ್ಥಾನದ ಆವರಣದಲ್ಲಿ ಮೇ 13ರಂದು ಚಾಲನೆ ನೀಡಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಮತ್ತು ಸಖಿ ಒನ್ ಸ್ಟಾಪ್ ಸೆಂಟರ್ ಕೊಪ್ಪಳ ಅವರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನಾಧಿಗಳಾದ ಪೂರ್ಣಿಮಾ ಯೋಳಭಾವಿ, ಹುಲಿಗೆಮ್ಮ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಅರವಿಂದ್ ಅಯ್ಯಪ್ಪ ಸುತಗುಂಡಿ ಅವರು ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆಯ ಜಾಗೃತಿಯ ಬಿತ್ತಿಪತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಅರವಿಂದ್ ಸುತಗುಂಡಿ ಅವರು ಮಾತನಾಡಿ, ದೇವರ ಹೆಸರಿನಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಬಲಿ ತೆಗೆದುಕೊಳ್ಳುವ ದೇವದಾಸಿ ಪದ್ಧತಿಯಂತಹ ಅಂಧ ಆಚರಣೆಗಳು ಮಕ್ಕಳ ಮತ್ತು ಮಹಿಳೆಯರ ಮೇಲೆ ದುಷ್ಟರಿಣಾಮವನ್ನುಂಟು ಮಾಡುತ್ತದೆ. ಬಾಲ್ಯವಿವಾಹ ಪದ್ದತಿ ನಿಲ್ಲಬೇಕು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ತಿಳಿಸಿದರು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪೂರ್ಣಿಮಾ ಯೋಳಭಾವಿ ಅವರು ಮಾತನಾಡಿ, ಅನೇಕ ಶತಶತಮಾನಗಳಿಂದಲೂ ಅನಕ್ಷರತೆ, ಮೂಢನಂಬಿಕೆ, ಪರಸ್ಪರ ಶೋಷಣೆ, ದೌರ್ಜನ್ಯಗಳಿಂದ ಬಳಲಿದ ಸಮಾಜವು 21ನೇ ಶತಮಾನದಲ್ಲಿಯಾದರೂ ಶಾಂತಿ ನೆಮ್ಮದಿ ಪರಸ್ಪರ ಸೌಹಾರ್ದತೆಯಿಂದ ಇರಬೇಕಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಾಗುತ್ತಿರುವ ಶೋಷಣೆ ದೌರ್ಜನ್ಯಗಳನ್ನು ತಡೆಗಟ್ಟಲು ಸಾಮಾಜಿಕ ಜಾಗೃತಿ ಕಹಳೆಯನ್ನು ಮೊಳಗಿಸೋಣ ಎಂದರು. ದೇವಿಯ ಜಗಹೊತ್ತು ಬರುವ ಜೋಗಮ್ಮ, ಜೋಗಪ್ಪಗಳಿಗೆ ಭಿಕ್ಷೆ ಅಥವಾ ಜೋಗ ನೀಡುವುದನ್ನು ನಿಲ್ಲಿಸಬೇಕು ಹಾಗೂ ಅವರಿಗೆ ಬದುಕಲು ತಿಳಿವಳಿಕೆ ನೀಡಬೇಕೆಂದು ತಿಳಿಸಿದರು. ಸಖಿ-ಒನ್‌ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಯಮುನಾ ಬೇಸ್ತಾರ ಅವರು ಮಾತನಾಡಿ, ಮೈಯಲ್ಲಿ ದೇವರು ಬಂದಂತೆ ಆಡುವವರಿಗೆ, ಮಾನಸಿಕ ಸನ್ನಿ ಬರುವಂತವರಿಗೆ ಮನೋವೈದ್ಯ ತಜ್ಞರಿಂದ ಚಿಕ್ಸಿತೆ ಮಾಡಿಸುವುದು ಅತೀ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂತಹ ಯಾವುದೇ ರೀತಿಯ ಜನರು ಕಂಡು ಬಂದಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿರುವ ತುರ್ತ ಚಿಕಿತ್ಸಾ ಘಟಕ-ಉಚಿತ ಸಲಹಾ ಕೇಂದ್ರ ಸಖಿ-ಒನ್ ಸ್ಟಾಪ್ ಸೆಂಟರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ ಘಟಕಕ್ಕೆ ತಿಳಿಸಬೇಕೆಂದು ಮಾಹಿತಿ ನೀಡಿದರು. ಈ ಜಾಗೃತಿ ಕಾರ್ಯಕ್ರಮದಲ್ಲಿ ಅನಿಷ್ಠ ಪದ್ಧತಿಗಳ ಕುರಿತು ಜಾಗೃತಿ ಮೂಡಿಸಲು ಆಟೋ ಪ್ರಚಾರ ಮಾಡಲಾಯಿತು. ಮತ್ತು ಮಾಹಿತಿ ಕೇಂದ್ರದ ಮೂಲಕ ಹಾಗೂ ಕರ ಪತ್ರಗಳನ್ನು ವಿತರಿಸುವುದರ ಮೂಲಕ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಕೊಪ್ಪಳದ ದೇವದಾಸಿ ಪುನರ್ವಸತಿ ಯೋಜನಾಧಿಕಾರಿಗಳಾದ ದಾದೇಸಾಬ ಎಚ್, ಸಕ್ಕುಬಾಯಿ ಎಸ್.ಎಚ್., ಗಂಗಾವತಿ ತಾಲೂಕಿನ ದೇವದಾಸಿ ಪುನರ್ವಸತಿ ಯೋಜನಾಧಿಕಾರಿಗಳಾದ ಭೀಮಣ್ಣ ಟಿ.ಜಿ, ಯಲಬುರ್ಗಾ ತಾಲೂಕಿನ ದೇವದಾಸಿ ಪುನರ್ವಸತಿ ಯೋಜನಾಧಿಕಾರಿಗಳಾದ ರೇಣುಕಾ ಎಮ್. ಕುಷ್ಟಗಿ, ತಾಲೂಕಿನ ದೇವದಾಸಿ ಪುನರ್ವಸತಿ ಯೋಜನಾಧಿಕಾರಿಗಳಾದ ಮರಿಯಪ್ಪ ಎಮ್ ಮತ್ತು ದೇವದಾಸಿ ಯೋಜನೆಯ ಸ್ವಯಂ ಸೇವಕರು ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್ ಮಲ್ಟಿಪರ್ಪಸ್ ವರ್ಕರ್ ಸರೋಜಾ ಹಿರೇಮಠ್ ಅವರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.