ವರದಿ :ಬಂಗಾರಪ್ಪ ಸಿ ಹನೂರು , ಹನೂರು :ಕ್ಷೇತ್ರದಲ್ಲಿ ಅಭಿವೃದ್ದಿಗಾಗಿ ನಮ್ಮ ಪಕ್ಷದ ಅಭ್ಯರ್ಥಿ ಎಮ್ ಆರ್ ಮಂಜುನಾಥ್ ರನ್ನು ಗೆಲ್ಲಿಸಲು ಮತದಾರರಲ್ಲಿ ಮನವಿ ಮಾಡಿದರು, ಹನೂರು ಪಟ್ಣಣದ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಸಾವಿರಾರು ಜನರ ಸಮ್ಮುಖದಲ್ಲಿ ಬೃಹತ್ ರೋಡ್ ಶೋ ಮೂಲಕ ಮತಪ್ರಚಾರ ನಡೆಸಿದರು.
ಪಟ್ಟಣದ ಹೊರವಲಯದ ಅಜ್ಜಿಪುರ ಮುಖ್ಯ ರಸ್ತೆಯಲ್ಲಿರುವ ಹೆಲಿಪ್ಯಾಡ್ ಗೆ ಹೆಲಿಕ್ಯಾಪ್ಟರ್ ಮುಖಾಂತರ ಆಗಮಿಸಿದ ಗಣ್ಯರು ಪಟ್ಟಣದ ಅನ್ನಪೂರ್ಣೇಶ್ವರಿ ಹೋಟೆಲ್ ವೃತ್ತದಿಂದ ಸಾವಿರಾರು ಕಾರ್ಯಕರ್ತರ ನೂಕು ನುಗ್ಗಲಿನ ನಡುವೆ ತೆರೆದ ವಾಹನದಲ್ಲಿ ಸಾಗಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಖಾಸಗಿ ಬಸ್ ನಿಲ್ದಾಣದ ಬಳಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು ಹನೂರು ಪಟ್ಟಣದಲ್ಲಿ ನಡೆಯುತ್ತಿರುವ ಜೆಡಿಎಸ್ ಚುನಾವಣಾ ಪ್ರಚಾರದ ರೋಡ್ ಶೋ ಐತಿಹಾಸಿಕವಾದದ್ದು ಎಂದು ಬಣ್ಣಿಸಿ ಮಾತು ಮುಂದುವರಿಸಿದರು. ಜೆಡಿಎಸ್ ಅಭ್ಯರ್ಥಿ ಎಂ.ಆರ್.ಮಂಜುನಾಥ್ ಅವರನ್ನು ಶಾಸಕರನ್ನಾಗಿ ಕಳುಹಿಸಿ ನಾನು ಈ ಜಿಲ್ಲೆಗೆ ಮಂತ್ರಿ ಮಾಡುತ್ತೇನೆ. ಮೇಕೆದಾಟು ಯೋಜನೆಯನ್ನು ಸಾಕಾರಗೊಳಿಸಿ ಈ ಭಾಗದ ಜನತೆಯ ಕಲ್ಯಾಣಕ್ಕೆ ಶ್ರಮಿಸುತ್ತೇನೆ.ನಮ್ಮ ಅಭ್ಯರ್ಥಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆಗಳಿಗೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋತಿದ್ದರು ಕೂಡ ಕ್ಷೇತ್ರ ಬಿಟ್ಟು ಹೋಗದೆ ಕಳೆದ 5 ವರ್ಷಗಳಿಂದ ನಿರಂತರವಾಗಿ ಜನರ ಕಷ್ಟ ಸುಖಗಳಿಗೆ ಭಾಗಿಯಾಗಿ ಮನೆ ಮಗನಂತಿದ್ದಾರೆ. ನನ್ನ ಬಳಿ ಯಾವಾಗಲೂ ಚರ್ಚಿಸುತ್ತಾರೆ ಕ್ಷೇತ್ರದಲ್ಲಿ ಉದ್ಯೋಗ ಕಲ್ಪಿಸಬೇಕೆಂದು. ಈ ನಿಟ್ಟಿನಲ್ಲಿ ನಮ್ಮ ಜೊತೆ ಕೈಜೋಡಿಸಿ ಹನೂರು ಭಾಗದಲ್ಲಿ ಕೈಗಾರಿಕೆಯನ್ನು ತೆರೆಯುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುತ್ತೇನೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ವರ್ಷಕ್ಕೆ ಐದು ಸಿಲೆಂಡರ್ ಗಳನ್ನು ಉಚಿತವಾಗಿ ನೀಡಲಾಗುವುದು. 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಮಾಸಿಕ 5,000 ರೂ.ಗಳು, ವಿಧವೆಯರಿಗೆ ಮದುವೆಯಾಗದ ಹೆಂಗಸಿರಿಗೆ 2500 ರೂ.ಗಳನ್ನು ನೀಡಲಾಗುವುದು. ರೈತರ ಕೃಷಿ ಅಭಿವೃದ್ಧಿಗೆ ಮುಂಗಾರಿನ ವೇಳೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ಪ್ರತಿ ಎಕರೆಗೆ 10,000ಗಳನ್ನು ಒದಗಿಸಲಾಗುವುದು. ಭೂಮಿ ಇಲ್ಲದ ಪ್ರತಿ ತಿಂಗಳು 2000 ಗಳನ್ನು ನೀಡಲಾಗುವುದು. ರೈತರು ಕೃಷಿ ಕಾರ್ಮಿಕರು ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಎಲ್ ಕೆ ಜಿ ಇಂದ 12ನೇ ತರಗತಿವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಖಾಸಗಿ ಶಿಕ್ಷಣದ ಮಾದರಿಯಲ್ಲಿ ಉಚಿತ ಶಿಕ್ಷಣವನ್ನು ನೀಡಲಾಗುವುದು. ಪಂಚರತ್ನ ಐದು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸ್ಪಷ್ಟ ಬಹುಮತದ ಅವಶ್ಯಕತೆ ಇರುವುದರಿಂದ ನಾಡಿನ ಜನತೆ ಜೆಡಿಎಸ್ ಅನ್ನು ಬೆಂಬಲಿಸಬೇಕು. ಬಿಜೆಪಿ ಕಾಂಗ್ರೆಸ್ ಜೊತೆಗೂಡಿ ಈ ಒಂದು ಕಾರ್ಯವನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದ ಅವರು ಹನೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ರಾಜ್ಯದ ಇತರೆ ವಿಧಾನಸಭಾ ಕ್ಷೇತ್ರಗಳಿಗಿಂತ ಹೆಚ್ಚಿನ ಬಹುಮತದ ಮೂಲಕ ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಅಧಿಕಾರದಲ್ಲಿರುವ ಬಿಜೆಪಿ ಕೋಮುವಾದಿ ಸರ್ಕಾರವಾಗಿದೆ. ಇವರು ಪ್ರತಿ ದಿನ ಎರಡು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದು, ನಿರಪರಾಧಿಗಳನ್ನು ಜೈಲಿಗೆ ಕಳಿಸುವುದು ಇವರ ಕೆಲಸವಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ 40% ಭ್ರಷ್ಟ ಸರ್ಕಾರಗಳಾಗಿವೆ. ಇದನ್ನು ತೊಲಗಿಸಲು ಈ ಬಾರಿ ಜನತೆ ಜೆಡಿಎಸ್ ಅನ್ನು ಬೆಂಬಲಿಸಬೇಕು. 2024 ರ ಚುನಾವಣೆಯಲ್ಲಿ ಇವರು ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ. ದ್ವೇಷ ಭಾಷಣದ ಮೂಲಕ ಮುಸ್ಲಿಮರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಮರ ರಕ್ಷಣೆ ಆಗಬೇಕಾದರೆ ಮುಸ್ಲಿಂ ಸಮುದಾಯದವರು ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿ. ಜೆಡಿಎಸ್ ಮೀಸಲಾತಿ ಹಾಗೂ ಮುಸ್ಲಿಮರ ರಕ್ಷಣೆಯನ್ನು ಮಾಡುತ್ತದೆ ಎಂದರು. ಇದೇ ಸಂದರ್ಭದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, ಜೆಡಿಎಸ್ ಅಭ್ಯರ್ಥಿ ಎಂ ಅರ್ ಮಂಜುನಾಥ್ ಸೇರಿದಂತೆ ಇತರರು ಹಾಜರಿದ್ದರು , ಪ್ರಚಾರ ಸಭೆ ಹಿನ್ನೆಲೆಯಲ್ಲಿ ಕ್ಷೇತ್ರದ ವಿವಿಧಡೆಯಿಂದ ಅಪಾರ ಸಂಖ್ಯೆಯ ಜನರು ಹಾಜರಿದ್ದರು.